ಭಟ್ಕಳ: ತಟ್ಟಿಹಕ್ಕಲ್, ಶಿರಾಲಿ ನಿವಾಸಿ 18 ವರ್ಷದ ಜಿಯಾನ ಅಬ್ದುಲ್ ಮುನಾಫ್ ಜುಲೈ 18ರಂದು ತಮ್ಮ ತಂಗಿಯೊಂದಿಗೆ ಭಟ್ಕಳಕ್ಕೆ ತೆರಳುತ್ತೇನೆಂದು ಹೇಳಿ ಮನೆಬಿಟ್ಟು ಹೋಗಿದ್ದಳು. ತಂಗಿಯನ್ನು ಮನೆಗೆ ಬಿಟ್ಟ ನಂತರ ಸ್ನೇಹಿತೆಯೊಂದಿಗಾಗಿ ಹೊರಟಿದ್ದಳು. ನಂತರ ಮನೆಗೆ ಮರಳದೆ ನಾಪತ್ತೆಯಾಗಿದ್ದಳು.ಪೋಷಕರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸಿಪಿಐ ಮಂಜುನಾಥ ಎ. ಲಿಂಗಾರೆಡ್ಡಿ ತಕ್ಷಣ ಶೋಧ ಕಾರ್ಯ ಆರಂಭಿಸಿದರು. ಯುವತಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಾಹಿತಿ ಲಭಿಸಿದ್ದು, ಮೊಬೈಲ್ ಲೊಕೇಶನ್ ಪರಿಶೀಲನೆಯಿಂದ ಉತ್ತರ ಪ್ರದೇಶದ ಮಥುರಾದಲ್ಲಿರುವುದು ಪತ್ತೆಯಾಯಿತು.ಮಥುರಾ ಪೊಲೀಸರ ಸಹಕಾರ ಪಡೆದು, ಯುವತಿ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳೆಯೊಂದಿಗೆ ತೆರಳಿದ್ದ ಮಾಹಿತಿ ಸಿಕ್ಕಿತು. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಹಿಳೆ ರಾಜಸ್ಥಾನದ ಯುವಕನೊಂದಿಗೆ ಸ್ನೇಹ ಹೊಂದಿದ್ದ ಹಿನ್ನೆಲೆ, ಈಕೆಯೊಂದಿಗೆ ಯುವತಿಯ ಪ್ರಯಾಣ ಶಂಕೆ ಉಂಟುಮಾಡಿದೆ.ಎಎಸ್‌ಐ ರಾಜೇಶ್ ಕೆ. ಸಿಬ್ಬಂದಿಗಳಾದ ಅಕ್ಷತ ಕುಮಾರ್ ಮತ್ತು ಮಹಿಳಾ ಸಿಬ್ಬಂದಿ ಸಾವಿತ್ರಿ ಮಥುರಾ ತೆರಳಿ, ಸ್ಥಳೀಯ ಪೊಲೀಸರ ಸಹಯೋಗದಿಂದ ಯುವತಿಯನ್ನು ಪತ್ತೆಹಚ್ಚಿ, ಭಟ್ಕಳಕ್ಕೆ ಕರೆತಂದು ಪೋಷಕರಿಗೆ ಹಸ್ತಾಂತರಿಸಿದರು,ಜಿಯಾನಾ ಸ್ವಇಚ್ಛೆಯಿಂದ ಮಹಿಳೆಯೊಂದಿಗೆ ತೆರಳಿದ್ದಾಗಿ ತಿಳಿಸಿದ್ದಾಳೆ.
ಗ್ರಾಮೀಣ ಠಾಣೆ ಪೊಲೀಸರು ತೋರಿದ ತ್ವರಿತ ಕ್ರಮಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವರದಿ: ಉಲ್ಲಾಸ್ ಶಾನಭಾಗ್ ಶಿರಾಲಿ