ಎಸ್.ಎಸ್.ಎಲ್.ಸಿ ಪರೀಕ್ಷೆ ಭಟ್ಕಳ ತಾಲೂಕಿನಲ್ಲಿ ಶೇ.96 ಫಲಿತಾಂಶ
18 ಶಾಲೆಗಳಲ್ಲಿ ಶೇ.100 ಫಲಿತಾಂಶ
ಭಟ್ಕಳ: ಭಟ್ಕಳ ತಾಲೂಕಿನ ಎಸ್.ಎಸ್. ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಕಳೆದ ಬಾರಿಗಿಂತ ಈ ಬಾರಿ ಉತ್ತಮ ಫಲಿತಾಂಶ ದಾಖಲಾಗಿದ್ದು ಶೇ. 96% ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೊಗೇರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಅವರು ಗುರುವಾರ ಸಂಜೆ ಕ್ಷೇತ್ರಶಿಕ್ಷಣ ಕಾರ್ಯಲಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ವಿಶ್ಲೇಷಿಸಿ ಮಾಹಿತಿ ನೀಡಿದರು.
ಫಲಿತಾಂಶ ತಮಗೆ ತೃಪ್ತಿ ನೀಡಿದೆ ಎಂದ ಅವರು ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಾದ ಭಾವನಾ ಹಾಗೂ ಹರ್ಷಾನ್ ಶೇ. 98.88 ಅಂಕ ಪಡೆಯುವುದರ ಮೂಲಕ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದರು. ಉಳಿದಂತೆ ಅಂಜುಮನ್ ಬಾಲಕೀಯರ ಪ್ರೌಢಶಾಲೆ ವಿದ್ಯಾರ್ಥಿಗಳಾದ ಮೈಮುನಾ ಅಜಾಯಿಬ್ ಶೇ.98.72, ಫಾತಿಮಾ ರಿಹಾ ಶೇ. 98.24, ಫಾತಿಮಾ ಸೆರಾ ಗಂಗಾವಳಿ ಶೇ. 98.08, ಸ.ಪ್ರೌ.ಶಾಲೆ ತೆಂಗಿನ ಗುಂಡಿಯ ವಿದ್ಯಾರ್ಥಿ ಮನೋಜ್ ಭೈರಾ ಮೊಗೇರ್ ಶೇ. 97.92 ಹಾಗೂ ಕಿತ್ತೂರು ರಾಣಿ ಚೆನ್ನಮ್ಮಾ ವಸತಿ ಶಾಲೆಯ ನಯನಾ ಗೊಂಡ ಶೇ. 97.92 ಫಲಿತಾಂಶ ಪಡೆದುಕೊಂಡಿದ್ದಾರೆ.8 ಸರ್ಕಾರಿ ಪ್ರೌಢಶಾಲೆಗಳು, 3 ಅನುದಾನಿತ ಶಾಲೆಗಳು ಹಾಗೂ 7 ಅನುದಾನಿತ ಪ್ರೌಢಶಾಲೆಗಳು ಶೇ.100 ಫಲಿತಾಂಶ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ವರ್ಷ ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮಗೊಳಿಸಿಕೊಳ್ಳಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಮಾರ್ಗದರ್ಶನ ಕಾರ್ಯಗಾರಗಳನ್ನು ಏರ್ಪಡಿಸಲಾಗಿತ್ತು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ತಾಲೂಕು ಮಟ್ಟದಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗಿತ್ತು. ವಿಶೇಷವಾಗಿ ಉರ್ದು ಶಾಲೆಗಳಲ್ಲಿ ಫಲಿತಾಂಶವನ್ನು ಹೆಚ್ಚಿಸಿಕೊಳ್ಳಲು ಮುಖ್ಯಾಧ್ಯಾಪಕರು ಮತ್ತು ಶಿಕ್ಷಕರು ಉತ್ತಮ ಪ್ರಯತ್ನ ಮಾಡಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಉರ್ದು ಶಾಲೆಗಳ ಫಲಿತಾಂಶದಲ್ಲಿ ಏರಿಕೆಯಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ವಿ.ಡಿ.ಮೊಗೇರ್ ಮಾಹಿತಿ ನೀಡಿದರು.