ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಿ ತೋರಿಸುತ್ತೇನೆ. ಇದು ನನ್ನ ಜವಾಬ್ದಾರಿ. ನನ್ನ ಮೇಲೆ ವಿಶ್ವಾಸವಿಡಿ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.
ನಾಮಧಾರಿ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಜನಪರ ಕೆಲಸ ಮಾಡುವುದೇ ನನ್ನ ಗುರಿ. ಕಾಂಗ್ರೆಸ್ ವಿಚಾರಧಾರೆಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಅತಿಕ್ರಮಣ ಬಿಟ್ಟರೆ ಎರಡನೇ ಅತಿಮುಖ್ಯ ವಿಷಯವೇ ಸುಸಜ್ಜಿತ ಆಸ್ಪತ್ರೆ. ಆದ್ಯತೆಯ ಮೇರೆಗೆ ಈ ವಿಷಯದ ಕುರಿತು ಚರ್ಚಿಸುತ್ತೇನೆ. ಒಳ್ಳೆಯ ಅವಕಾಶ ಈ ಬಾರಿ ಇದೆ. ನೂರಕ್ಕೆ ನೂರು ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ಆಸ್ಪತ್ರೆ ಮತ್ತು ಗೋಲ್ಡನ್ ಅವರ್ ಬಗ್ಗೆ ವೈದ್ಯೆಯಾಗಿ ಅರಿವಿದೆ. ಅಪಘಾತವಾದಾಗ ಜಿಲ್ಲೆಯಲ್ಲಿ ಯಾವ ಪರಿಸ್ಥಿತಿ ಇರುತ್ತದೆ ಎಂಬುದು ಖುದ್ದು ಅನುಭವಕ್ಕೂ ಬಂದಿದೆ. ಈವರೆಗೂ ಜನಪರವಾಗಿದ್ದೇನೆ, ಆರಿಸಿ ಬಂದ ಬಳಿಕವೂ ಕೆಲಸ ಮಾಡುತ್ತೇನೆ. ಎಲ್ಲಾ ಸಮಾಜಕ್ಕೂ ನ್ಯಾಯ ಕೊಡುತ್ತೇನೆ. ಈ ಭಾಗದ ಸೇವೆಗೆ ಈ ಬಾರಿ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ವಕೀಲ ಹಾಗೂ ನಾಮಧಾರಿ ಮುಖಂಡ ಆರ್.ಜಿ.ನಾಯ್ಕ ಮಾತನಾಡಿ, ಜಿಲ್ಲೆಗೆ ಅತ್ಯವಶ್ಯವಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಬಿಜೆಪಿಯ ಶಾಸಕರು, ಸಚಿವರುಗಳನ್ನ ಭೇಟಿಯಾಗಿ ಮನವಿ ಮಾಡಿದ್ದೆವು. ಜಾಗ ಕೂಡ ತೋರಿಸಿದ್ದೆವು. ಆದರೆ ಚುನಾವಣೆ ಹತ್ತಿರ ಬಂದಾಗ ಅಂಗೈನಲ್ಲಿ ಆಕಾಶ ತೋರಿಸಿದರು. ಮುಖ್ಯಮಂತ್ರಿ ಬರುತ್ತಾರೆ, ಅಡಿಗಲ್ಲು ಹಾಕುತ್ತಾರೆಂದು ನಂಬಿಸಿದರು. ಬಜೆಟ್‌ನಲ್ಲಿ ನಯಾ ಪೈಸೆ ಅದಕ್ಕಾಗಿ ಮೀಸಲಿಡದೆ ವಂಚಿಸಿದರು. ಈಗಿನ ಬಿಜೆಪಿ ಅಭ್ಯರ್ಥಿ ಸ್ಪೀಕರ್ ಇದ್ದಾಗ ಸ್ಥಳೀಯ ಶಾಸಕರುಗಳಿಗೆ ಆಸ್ಪತ್ರೆಯ ಬಗ್ಗೆ ಅಧಿವೇಶನದಲ್ಲಿ ಮಾತನಾಡಲೂ ಅವಕಾಶ ನಿರಾಕರಿಸಿದರು. ಹಿಂದಿನ ಸರ್ಕಾರದಲ್ಲಿ ಆಸ್ಪತ್ರೆ ಮರೀಚಿಕೆಯಾಯಿತು. ತಾವು ವೈದ್ಯರಾಗಿರುವುದರಿಂದ ಆಸ್ಪತ್ರೆಗೆ ಮೊದಲ ಆದ್ಯತೆ ನೀಡುತ್ತೀರೆಂದು ಭಾವಿಸಿದ್ದೇವೆ. ೩೦ ವರ್ಷ ಸಂಸದರಾದವರು ಏನು ಮಾಡಿದ್ದಾರೆಂಬುದು ಕಣ್ಣಮುಂದೆ ಇದೆ. ಹೊಸ ಅಭ್ಯರ್ಥಿಯನ್ನ ಜಿಲ್ಲೆಯ ಜನ ಬಯಸಿದ್ದಾರೆ. ಶಾಸಕರಾದಾಗ ದಿಟ್ಟತನ ತೋರಿಸಿದಂತೆ ಸಂಸದರಾದ ಮೇಲೂ ತಾವು ತೋರಬೇಕು. ನಿಮ್ಮನ್ನ ಆರಿಸಿ ತರುವ ಕೆಲಸ ನಮ್ಮದು. ಉತ್ತರಕನ್ನಡಿಗರ ಜೀವಕ್ಕಾಗಿ ಆಸ್ಪತ್ರೆ ನಿರ್ಮಿಸುವ ಕೆಲಸ ಮಾಡಿಕೊಡಬೇಕು. ಅದನ್ನ ಆಯ್ಕೆಯಾದಾಗ ಮೊದಲ ಆದ್ಯತೆಯಾಗಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ಕಾರ್ಯದರ್ಶಿ ನಿವೇದಿತ್ ಆಳ್ವಾ, ಜಿಲ್ಲೆಯಲ್ಲಿ ಬಿಜೆಪಿ ಸಂಸದರಿಂದ ೩೦ ವರ್ಷಗಳಲ್ಲಿ ಅಭಿವೃದ್ಧಿ ಆಗಿಲ್ಲ. ಒಂದು ಬಾರಿ ಸಂಸದರಾಗಿದ್ದ ಮಾರ್ಗರೇಟ್ ಆಳ್ವಾ ಅವರ ಹೆಸರು ಇನ್ನೂ ಪಂಚಾಯತಿಗಳಲ್ಲಿದೆ. ಭಿನ್ನಾಭಿಪ್ರಾಯವಿಲ್ಲದೆ ಡಾ.ಅಂಜಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅವರು ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ವಿಷಯದಲ್ಲಿ ಅಧ್ಯಯನ ಮಾಡಿಕೊಂಡೇ ಬಂದಿದ್ದಾರೆ. ಪಕ್ಷದ ನಾಯಕರು, ಕಾರ್ಯಕರ್ತರು ದಿನವಿಡೀ ಕೆಲಸ ಮಾಡುತ್ತಿದ್ದಾರೆ. ನಮ್ಮ ಕಡೆಯಿಂದ ಎಲ್ಲಾ ಸಹಕಾರ ನೀಡುತ್ತೇವೆ. ಸರ್ಕಾರ ನಮ್ಮದಿದೆ. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನ ಮೇಲೆ ಚುನಾವಣೆ ಎದುರಿಸುತ್ತಿದೆ. ಐದು ಆಶ್ವಾಸನೆ ನೇರವಾಗಿ ನಮ್ಮ ಮನೆಗೆ ಬರುತ್ತಿದೆ ಎಂದು ಜನತೆ ಹೇಳುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದರು.
ಮಾಲೂರು ಶಾಸಕ, ಕೆಪಿಸಿಸಿ ಕ್ಷೇತ್ರ ಉಸ್ತುವಾರಿ ನಂಜೇಗೌಡ, ಕ್ಷೇತ್ರದಲ್ಲಿ ಉತ್ತಮ ವಾತಾವರಣವಿದೆ. ಇನ್ನೆರಡು ದಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಬದಲಾವಣೆಯನ್ನ ಜನ ಬಯಸಿದ್ದಾರೆ. ಅಭ್ಯರ್ಥಿ ತುಂಬಾ ಚೆನ್ನಾಗಿ ಕೆಲಸ ಮಾಡುವಂಥವರು. ಅವರು ಸಿಕ್ಕಿರುವುದು ಈ ಭಾಗದ ಅದೃಷ್ಟ. ಸರ್ಕಾರದ ಗ್ಯಾರಂಟಿ ಮನೆಮನೆ ತಲುಪಿದೆ. ವಾತಾವರಣ ಕಾಂಗ್ರೆಸ್ ಪರವಾಗಿದೆ. ಜನರಲ್ಲಿ ಬಿಜೆಪಿ ವಿರುದ್ಧ ಅಭಿಪ್ರಾಯವಿದೆ. ಒಂದೇ ಒಂದು ಹಳ್ಳಿಗೆ ಸಂಸದರು ಭೇಟಿ ನೀಡಿಲ್ಲ. ಈ ಬಾರಿ ಡಾ.ಅಂಜಲಿ ಅವರನ್ನ ಆರಿಸಿ ತಂದು ಕೆಲಸ ಮಾಡಿಸಿಕೊಳ್ಳಬೇಕು ಎಂದು ಕರೆನೀಡಿದರು.
ತಾಲೂಕು ನಾಮಧಾರಿ ಸಮಾಜದ ಅಧ್ಯಕ್ಷ ಮಂಜು ನಾಯ್ಕ, ಹಿಂದಿನಿಂದಲೂ ನಾಮಧಾರಿ ಸಮಾಜ ಕಾಂಗ್ರೆಸ್ ಪರವಾಗಿದೆ. ಸಮಾಜವನ್ನೂ ಪಕ್ಷ ಕಡೆಗಣಿಸಬಾರದು. ನಾಯಕರುಗಳಿಗೆ ಸೂಕ್ತ ಸ್ಥಾನಮಾನ ಕೊಡಬೇಕು. ನಮ್ಮ ರಕ್ತವೂ ಕಾಂಗ್ರೆಸ್‌ನದ್ದು. ಗ್ಯಾರಂಟಿ ಪಡೆದು ಕಾಂಗ್ರೆಸ್‌ಗೆ ಮತ ಹಾಕದಿದ್ದರೆ ದೇವರೂ ಮೆಚ್ಚಲ್ಲ. ನಿಮ್ಮನ್ನ ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದರು.
ಸಂಘದ ಕಾರ್ಯದರ್ಶಿ ರಾಘು ನಾಯ್ಕ, ಮುಖಂಡರಾದ ಮಂಜುನಾಥ ನಾಯ್ಕ ಕುಮಟಾ, ರತ್ನಾಕರ್ ನಾಯ್ಕ, ಗಜು ನಾಯ್ಕ ಅಳ್ವೆಕೋಡಿ, ಆರ್.ಎಚ್.ನಾಯ್ಕ ಮುಂತಾದವರಿದ್ದರು.