ಕಾರವಾರ: ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಮಹಾರಾಷ್ಟ್ರ ಪರ ಮಾತನಾಡಿದ್ದಾರೆ ಎಂದು ಬಿಜೆಪಿಗರು ಆರೋಪಿಸುತ್ತಿರುವುದು ಅಪ್ಪಟ ಸುಳ್ಳು ಎಂದು
ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗಡಿ ವಿವಾದ ಸಂಬಂಧ ಮಹಾಜನ್ ವರದಿಯೇ ಅಂತಿಮ. ಈ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದ್ದು, ನ್ಯಾಯಾಲಯದ ಆದೇಶವೇ ಅಂತಿಮ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ; ಅದನ್ನೇ ನಮ್ಮ ಅಭ್ಯರ್ಥಿ ಕೂಡ ಹೇಳಿದ್ದಾರೆ. ಆದರೆ ಕಾರ್ಕಳ ಶಾಸಕ ಸುನೀಲ್‌ಕುಮಾರ್ ಈ ವಿಚಾರದಲ್ಲಿ ಸುಳ್ಳನ್ನ ಹೇಳಲು ಹೊರಟಿದ್ದಾರೆ. ಸುನೀಲ್‌ಕುಮಾರ್ ಕರಾವಳಿಯನ್ನ ಪರಶುರಾಮ ಸೃಷ್ಟಿ ಎಂದು ಅವರ ಕ್ಷೇತ್ರದಲ್ಲಿ ಪರಶುರಾಮ ಪಾರ್ಕ್ ಮಾಡಲು ಹೊರಟಿದ್ದರು. ಪರಶುರಾಮ ಮೂರ್ತಿ ಸಹ ಉದ್ಘಾಟಿಸಿದ್ದರು. ಆದರೆ ಅವರು ಮಾಡಿಸಿದ್ದ ಕಂಚಿನ ಪ್ರತಿಮೆ ನಂತರ ಕಳಚಿಕೊಂಡು ಬೀಳಲಾರಂಭಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟ ನಡೆದಾಗ ಮೂರ್ತಿ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ಮಾಡಿದ್ದು ಬೆಳಕಿಗೆ ಬಂದಿತ್ತು. ಇದು ಸುನೀಲ್‌ಕುಮಾರ್ ಅವರ ಅಭಿವೃದ್ಧಿಯ ಹಿನ್ನಲೆ ಎಂದರು.
ಇಂತಹ ನಾಯಕರು ನಮ್ಮ ಅಭ್ಯರ್ಥಿ ಹೇಳದೇ ಇರುವುದನ್ನ ಹೇಳಿದ್ದಾರೆಂದು ಸುಳ್ಳು ಆರೋಪ ಮಾಡಲು ಹೊರಟಿದ್ದಾರೆ. ಆ ಮೂಲಕ ಚುನಾವಣಾ ಲಾಭ ಪಡೆಯಲು ಹೊರಟಿದ್ದು, ಈ ಬಗ್ಗೆ ಸುನೀಲ್‌ಕುಮಾರ್ ವಿರುದ್ಧ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದ ಅವರು, ಬಿಜೆಪಿ ಅಭ್ಯರ್ಥಿ ಕಾಗೇರಿಯವರು ಉತ್ತರ ಕನ್ನಡ ಜಿಲ್ಲೆಯನ್ನ ಇಬ್ಬಾಗಿಸಲು ಹೊರಟಿದ್ದರು. ಇದರಿಂದ ಜೊಯಿಡಾ, ಹಳಿಯಾಳ ಭಾಗದ ಶಿಕ್ಷಕರು ಪರದಾಡುವಂತಾಗಿತ್ತು. ಹಲವು ಕಚೇರಿಗಳನ್ನ ಶಿರಸಿಗೆ ವರ್ಗಾಯಿಸಿದ್ದರು. ಮುಂದೆ ಸಂಸದರಾದರೆ ಇದೇ ಮನಸ್ಥಿತಿ ಮುಂದುವರೆಸುವ ಸಾಧ್ಯತೆ ಇದೆ ಎನ್ನುವುದನ್ನ ಮತದಾರರು, ಈ ಜಿಲ್ಲೆಯ ಜನ ಮರೆಯಬಾರದು ಎಂದರು.
ನಮ್ಮವರು ನಾಮಪತ್ರ ಸಲ್ಲಿಕೆ ವೇಳೆ ಕೇಸರಿ ಬಟ್ಟೆ ಹಾಕಿದ್ದಕ್ಕೆ ಬಿಜೆಪಿಗರು ವಿರೋಧಿಸಿದ್ದಾರೆ. ಕೇಸರಿ ರಾಷ್ಟ್ರಧ್ಚಜದ ಬಣ್ಣ. ಶಕ್ತಿ, ಪರಿಶ್ರಮ ಹಾಗೂ ತ್ಯಾಗದ ಸಂದೇಶ. ಬಿಜೆಪಿಗರಿಗೆ ಕೇಸರಿ ಬಣ್ಣ ಗುತ್ತಿಗೆ ನೀಡಿಲ್ಲ. ಚುನಾವಣೆ ಸಂಧರ್ಭದಲ್ಲಿ ಕೇಸರಿ ಬಣ್ಣವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಬಿಜೆಪಿಗರ ಮನಸ್ಥಿತಿ ಎಂದು ಆರೋಪಿಸಿದರು. ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್ ನುಡಿದಂತೆ ನಡೆದಿದೆ. ಗ್ಯಾರಂಟಿಗಳನ್ನ ಬಿಜೆಪಿಗರು ಟೀಕಿಸುತ್ತಿದ್ದಾರೆ. ಗ್ಯಾರಂಟಿಗಳ ಮೂಲಕ ಜನರ ಸಹಾಯಕ್ಕೆ ನಿಂತರೆ ಬಿಜೆಪಿಗರು ಗ್ಯಾರಂಟಿಗಳ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇರುವವರೆಗೂ ಗ್ಯಾರಂಟಿ ಅನುಷ್ಟಾನವಿರುತ್ತದೆ ಎಂದರು.
ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಜಿ.ಪಿ ನಾಯಕ ಮಾತನಾಡಿ, ಅಂಜಲಿ ನಿಂಬಾಳ್ಕರ್ ಜಿಲ್ಲೆಯವರಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಖಾನಾಪುರ ಕೆನರಾ ಕ್ಷೇತ್ರಕ್ಕೆ ಸೇರಿದ್ದರೆ ಅವರು ಬೇರೆ ಜಿಲ್ಲೆಯವರು ಹೇಗಾಗುತ್ತಾರೆ? ಕಾಗೇರಿಯವರು ಅಂಕೋಲಾದ ಶಾಸಕರಾಗಿದ್ದರು. ಹಾಗಾದರೆ ಅವರನ್ನ ನಾವು ಶಿರಸಿಯವರು ಎಂದು ಎಲ್ಲಿಯೂ ನೋಡಿರಲಿಲ್ಲ. ಶಿರಸಿಯೂ ಆ ಕ್ಷೇತ್ರದ ಭಾಗವೇ ಆಗಿತ್ತು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಜೇಂದ್ರ ರಾಣೆ, ಪರುಷೋತ್ತಮ ಗೌಡ, ಸಲೀಂ ಶೇಖ್, ಗಣಪತಿ ಕುಡ್ತಲಕರ್, ಸಿ.ಜಿ.ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.