ಬಿಜೆಪಿಗರ ಸುಳ್ಳುಗಳಿಗೆ ಕಿವಿಗೊಡದಿರಿ: ಮತದಾರರಿಗೆ ಮಂಕಾಳ ವೈದ್ಯ ಕರೆ

Share

ಭಟ್ಕಳ: ವ್ಯವಸ್ಥೆ ಹಾಳುಮಾಡಲು ಏನು ಬೇಕೋ ಅದನ್ನ ಮಾಡಲು ಬಿಜೆಪಿಗರು ಹಾತೊರೆಯುತ್ತಾರೆ. ಅಧಿಕಾರಕ್ಕಾಗಿ ಏನನ್ನೂ ಮಾಡುತ್ತಾರೆ, ಅವರ ಸುಳ್ಳುಗಳಿಗೆ ಜನ ಕಿವಿಗೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕರೆನೀಡಿದರು.

ಹೆಬಳೆ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್‌ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ೫೨ ಸಾವಿರ ಕೋಟಿ ರೂ. ಸಹಾಯಧನದಂತೆ ಗ್ಯಾರಂಟಿ ಯೋಜನೆಯಲ್ಲಿ ಬಡಜನರಿಗೆ ನೀಡಿದ್ದೇವೆ. ಇಷ್ಟು ಹಣ ಬಿಜೆಪಿ ಆಡಳಿತದಲ್ಲಿ ಏನಾಯಿತು? ಎಂದು ಪ್ರಶ್ನಿಸಿದ ಅವರು, ಯಾವುದೇ ಕಾರಣಕ್ಕೂ ಈ ಬಾರಿ ಅವಕಾಶವನ್ನ ಬಿಟ್ಟುಕೊಟಬಾರದು. ನಮ್ಮ ಅಭ್ಯರ್ಥಿಯನ್ನ ಬಹುಮತದಿಂದ ಗೆಲ್ಲಿಸಿಕೊಡಬೇಕಿದೆ ಎಂದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಬಿಜೆಪಿಗರು ಇತಿಹಾಸವನ್ನೇ ಬದಲಿಸಲು ಹೊರಟಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಬಗ್ಗೆಯೂ ಟೀಕೆ ಮಾಡುತ್ತಾರೆ. ಬಿಜೆಪಿಗರು ಹುಟ್ಟಿದ ಆಸ್ಪತ್ರೆ, ಅವರು ಓದಿದ ಶಾಲೆಗಳು ನಿರ್ಮಾಣವಾಗಲು ಕಾರಣ ನೆಹರೂ. ಮೊಬೈಲ್ ಕ್ರಾಂತಿ ಆಗಿದ್ದು ರಾಜೀವ್ ಗಾಂಧಿಯವರ ಕಾಲದಲ್ಲಿ. ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ವಿರುದ್ಧ ಸಿಡಿದೆದಿದ್ದರು. ಬಿಜೆಪಿಗರು ಇತಿಹಾಸ ಮರೆತು ನಮ್ಮ ನಮ್ಮ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ಕುಸ್ತಿಪಟುಗಳು ಅತ್ಯಾಚಾರದ ಆರೋಪ ಮಾಡಿ ಪ್ರತಿಭಟಿಸಿದಾಗ ಎಲ್ಲಿ ಹೋಯಿತು ಬಿಜೆಪಿಗರ ‘ಭೇಟಿ ಬಚಾವೋ ಭೇಟಿ ಪಡಾವೋ’? ಎಲ್ಲಾ ಕಡೆಗೂ ಫೊಟೊ ಅವರದ್ದು, ದುಡ್ಡು ನಮ್ಮದು. ಈ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ? ಈ ಬಾರಿ ಅವಕಾಶ ನೀಡಿದರೆ ನಿಮ್ಮ ಧ್ವನಿಯಾಗಿ ಸಂಸತ್ ನಲ್ಲಿ ಹೋರಾಡುವೆ ಎಂದರು‌.

ಕೆಪಿಸಿಸಿ ವಕ್ತಾರ ಸುಧೀರಕುಮಾರ್ ಮಾತನಾಡಿ, ಇದು ಅನ್ನಭಾಗ್ಯ ಅಕ್ಕಿ ಕೊಟ್ಟರೂ ಟೀಕಿಸುವ ಕೂಗುಮಾರಿಗಳು ವರ್ಸಸ್ ಜೀವಪರ ಕಾಂಗ್ರೆಸ್ಸಿಗರ ಚುನಾವಣೆ. ಬಿಜೆಪಿಗರದ್ದು ಬಾಯಿ ಬಡಾಯಿ, ಖರ್ಚಿಲ್ಲದ ಪ್ರಚಾರ ಅವರದ್ದು. ಅಂಬಾನಿ, ಅದಾನಿಯ ಸಾಲ ಮನ್ನಾ ಮಾಡೋರು ಬಿಜೆಪಿಗರು; ರೈತರ, ಬಡವರ, ದೀನದಲಿತರ ಸಾಲ ಮನ್ನಾ ಮಾಡೋರು ಕಾಂಗ್ರೆಸ್ಸಿಗರು. ಅವರದ್ದು ಜನವಿರೋಧಿ ಆಡಳಿತ, ಐದೂ ಗ್ಯಾರಂಟಿಯನ್ನ ಅನುಷ್ಠಾನಕ್ಕೆ ತಂದ ನಾಲಿಗೆ ನಿಷ್ಠ ಸರ್ಕಾರ ಕಾಂಗ್ರೆಸ್‌ನದ್ದು. ೧೦ ವರ್ಷಗಳ ಬಿಜೆಪಿ ಆಡಳಿತ, ೧೦ ತಿಂಗಳ ಕಾಂಗ್ರೆಸ್ ಸರ್ಕಾರದ ಆಡಳಿತ ನೋಡಿ ಮತ ನೀಡಿ. ಜಡ್ಡುಗಟ್ಟಿದ ರಾಜಕೀಯ ವ್ಯವಸ್ಥೆಗೆ ಮದ್ದು ನೀಡಲು ಕಾಂಗ್ರೆಸ್ ಡಾ.ಅಂಜಲಿ ಅವರನ್ನು ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಚುನಾವಣೆಗೆ ನಿಲ್ಲಿಸಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ನಮ್ಮ ಪಂಚ ಗ್ಯಾರಂಟಿಗಳು ಜನಮನ್ನಣೆ ಗಳಿಸಿವೆ. ಇಡೀ ದೇಶದ ಚಿತ್ತ ಈ ಯೋಜನೆಯ ಮೇಲೆ ಕಣ್ಣೆತ್ತಿ ನೋಡಿದೆ. ಗ್ಯಾರಂಟಿಯನ್ನ ಟೀಕಿಸುತ್ತಿದ್ದ ಮೋದಿಯವರೇ ನಮ್ಮ ಯೋಜನೆಯನ್ನ ಕಾಪಿ ಮಾಡಿ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಡಾ.ಅಂಜಲಿಯವರು ಎಲ್ಲಾ ರೀತಿಯಿಂದಲೂ ಸಮರ್ಥ ಅಭ್ಯರ್ಥಿ. ಉತ್ತರಕನ್ನಡದ ಸಮಸ್ಯೆಗಳ ಬಗ್ಗೆ ಅವರು ಸಂಸತ್ ನಲ್ಲಿ ಧ್ವನಿ ಎತ್ತಿ ಜಿಲ್ಲೆಯ ಜನರಿಗೆ ನ್ಯಾಯ ಕೊಡಿಸಲಿದ್ದಾರೆ ಎಂದರು.

ಈ ವೇಳೆ ಮಹಿಳಾ ಬ್ಲಾಕ್ ಕಾಂಗ್ರೆಸ್ ನಿಂದ ಉಡಿ ತುಂಬಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಗೌರವಿಸಲಾಯಿತು.

ಕೆಪಿಸಿಸಿ ಸಂಯೋಜಕ ವಿಶ್ವಾಸ್ ಅಮೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಾಜಿ ಅಧ್ಯಕ್ಷ ವಿಠಲ್ ನಾಯ್ಕ, ಜಿ.ಪಂ. ಮಾಜಿ ಸದಸ್ಯ ಅಲ್ಬರ್ಟ್ ಡಿಕೋಸ್ತಾ, ಮಹಾಬಲೇಶ್ವರ ನಾಯ್ಕ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಶೇಖ್, ಜಿ.ಪಂ. ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!