ಭಟ್ಕಳ: ಭಟ್ಕಳದಲ್ಲಿ ಮಸೀದಿ ಎದುರು ಕೇಸರಿ ಧ್ವಜ ಹಾರಿಸಿ ನಾಮಫಲಕಕ್ಕೆ ತಕರಾರು ಮಾಡುವ ಮೂಲಕ ಸಂಘಪರಿವಾರವು ಅಲ್ಲಿನ ಅಶಾಂತಿ ಮೂಡಿಸಲು ಸಂಚು ರೂಪಿಸಿದ್ದು ಸಂಘ ಪರಿವಾರದ ಕಾರ್ಯಕರ್ತರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಎಸ್.ಡಿ.ಪಿ.ಐ ವತಿಯಿಂದ ಡಿವೈಎಸ್ಪಿ ಶ್ರೀಕಾಂತ ಕೆ. ಮನವಿ ಸಲ್ಲಿಸಿದರು.
ಭಟ್ಕಳದ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಜನತಾ ಕ್ವಾರ್ಟರ್ಸ ಮಸೀದಿ ಎದುರು ಅನಧೀಕೃತವಾಗಿ ಕೇಸರಿ ಧ್ವಜ ಹಾರಿಸಿ ಅಲ್ಲಿನ ನಾಮ ಫಲಕದ ಕುರಿತು ತಕರಾರು ಮಾಡುವ ಮೂಲಕ ಸಂಘ ಪರಿವಾರದ ದಯಾ ನಾಯ್ಕ ಜಾಲಿ, ಕೃಷ್ಣ ನಾಯ್ಕ ಅಸರಕೇರಿ ಶ್ರೀನಿವಾಸ ನಾಯ್ಕ ಹನುಮಾನನಗರ, ಶ್ರೀಕಾಂತ ನಾಯ್ಕ ಅಸರಕೇರಿ ಮತ್ತು ಇತರರು ಅಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವ ಹುನ್ನಾರ ಮಾಡಿದ್ದಾರೆ ಮತ್ತು ಇದೆ ಸಂಘಪರಿವಾರದ ಕಾರ್ಯಕರ್ತರು ಸೆಪ್ಟೆಂಬರ್ 14, 2017ರಂದು ಪುರಸಭೆ ಮೇಲೆ ಕಲ್ಲು ತೂರಾಟ ಮಾಡಿ ಕಾನೂನು ಕೈಗೆತ್ತಿಕೊಂಡು ಭಟ್ಕಳ ಶಹರದಲ್ಲಿ ಕೋಮು ದ್ವೇಷವನ್ನು ಹರಡಿ ಶಾಂತಿಯನ್ನು ಕದಡಿದ ಬಗ್ಗೆ ಮೊಕದ್ದಮೆಯು ದಾಖಲಾಗಿತ್ತು.
ಈ ಪ್ರಯತ್ನದ ಹಿಂದೆ ಸಮಾಜದಲ್ಲಿ ದ್ವೇಷ ನಿರ್ಮಾಣ ಮಾಡುವ ಉದ್ದೇಶವಲ್ಲದೇ ಬೇರೆನಿಲ್ಲ. ಸದ್ಯ ಜಾಲಿ ಪಟ್ಟಣ ಪಂಚಾಯತ್ ಅಧಿಕಾರಿಗಳು ಯಥಾಸ್ಥಿತಿ ಕಾಪಾಡುವಂತೆ ತಿಳಿಸಿದ್ದಾರೆ. ಈ ವಿಚಾರವಾಗಿ ವಿನಾಕಾರಣ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಮತ್ತು ಸಂಘಪರಿವಾರದ ದ್ವೇಷಭರಿತ ಬೇಡಿಕೆಗಳಿಗೆ ಅವಕಾಶ ಮಾಡಿಕೊಡದೇ ಸಂಘಪರಿವಾರದ ಗೂಂಡಾ ಕಾರ್ಯಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ಮನವಿಯನ್ನು ಉಲ್ಲೇಖಿಸಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ. ಜಿಲ್ಲಾ ಅಧ್ಯಕ್ಷ ತೌಫಿಕ್ ಬ್ಯಾರಿ, ಜಿಲ್ಲಾ ಕಾರ್ಯದರ್ಶಿ ವಾಸೀಂ ಮನೆಗಾರ,ಭಟ್ಕಳ ವಿಧಾನ ಸಭಾ ಅಧ್ಯಕ್ಷ ಮಕ್ಬೂಲ್ ಶೇಕ್, ವಿಧಾನ ಸಭಾ ಕಾರ್ಯದರ್ಶಿ ಅಬ್ದುಲ್ ಸಮಿ ಇದ್ದರು.