ಭಟ್ಕಳ: ತಾಲೂಕಿನ ಸುಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲಿ ಒಂದಾದ ತಾಲೂಕಿನ ಸೋಡಿಗದ್ದೆ ಶ್ರೀ ಮಹಾಸತಿ ದೇವರ ಜಾತ್ರೆಯು ಮಂಗಳವಾರದಂದು ಹಾಲಹಬ್ಬದಿಂದ ಅದ್ದೂರಿಯಾಗಿ ಆರಂಭಗೊಂಡಿದ್ದು, ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ ತಿಪ್ಪೇಸ್ವಾಮಿ ಚಾಲನೆ ನೀಡಿದರು.
ಸತತ ಒಂಬತ್ತು ದಿನಗಳ ಕಾಲ ಅದ್ದೂರಿಯಾಗಿ ಸಂಭ್ರಮದಿಂದ ನಡೆಯುವ ಅತ್ಯಂತ ಮಹತ್ವದ ಜಾತ್ರೆಯಾಗಿದೆ. ಜಾತ್ರಾ ಮಹೋತ್ಸವಕ್ಕೆ ತಹಸೀಲ್ದಾರ್ ತಿಪ್ಪೇಸ್ವಾಮಿ ಮಧ್ಯಾಹ್ನ ವೇಳೆ ದೇವಸ್ಥಾನಕ್ಕೆ ತೆರಳಿ ಜಾತ್ರೆಗೆ ಚಾಲನೆಗೊಳಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಮಂಗಳವಾರದಂದು ಬೆಳಿಗ್ಗೆಯಿಂದಲೇ ಭಕ್ತರು ಶ್ರೀ ದೇವರಿಗೆ ಹೂವಿನ ಪೂಜೆಯನ್ನು ಸಲ್ಲಿಸಿ ದೇವರ ದರ್ಶನ ಪಡೆದುಕೊಂಡರು. ಮುಂಜಾನೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದು ತಮ್ಮ ಹರಕೆಯನ್ನು ತಿರಿಸಿದರು. ದಕ್ಷಿಣೋತ್ತರ ಜಿಲ್ಲೆಯ ಅತ್ಯಂತ ದೊಡ್ಡ ಜಾತ್ರೆಯಾದ ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ಜಾತ್ರೆಗೆ ಊರ ಹಾಗೂ ಪರ ಊರಿನಿಂದ ಸಹಸ್ರಾರು ಭಕ್ತಾಧಿಗಳು ಆಗಮಿಸಿ ತಮ್ಮ ಹರಕೆಗಳನ್ನು ತೀರಿಸುವುದು ಸಂಪ್ರದಾಯ ರೂಢಿಯಲ್ಲಿದೆ. ಜಾತ್ರೆಯ ಇನ್ನೊಂದು ವಿಶೇಷ ಎಂದರೆ ದೇವಸ್ಥಾನವನ್ನು ವಿಶೇಷ ರೀತಿಯ ಬಗೆ ಬಗೆಯ ಹೂವಿನಿಂದ ದೇವಾಲಯ ಪ್ರಾಂಗಣವನ್ನು ಸುಂದರವಾಗಿ ಕಂಗೊಳಿಸುವಂತೆ ಅಲಂಕೃತಗೊಳಿಸಲಾಯಿತು.
ಮೊದಲ ದಿನದ ಜಾತ್ರಾ ಮಹೋತ್ಸವಕ್ಕೆ ದೇವರ ದರ್ಶನಕ್ಕೆ ಭಕ್ತಾದಿಗಳ ನೂಕೂನುಗ್ಗಲು ಅಷ್ಟಾಗಿ ಕಂಡ ಬರಲಿಲ್ಲ. ಎರಡನೇ ದಿನದ ವಿಶೇಷ ಕೆಂಡ ಸೇವೆ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಬರಲಿದ್ದು, ತಮ್ಮ ಹರಕೆಯನ್ನು ತಿರಿಸಿ ದೇವಿಗೆ ಪೂಜೆಯನ್ನು ಸಲ್ಲಿಸಲಿದ್ದಾರೆ.
ಸೋಡಿಗದ್ದೆ ಶ್ರೀ ಮಹಾಸತಿ ಜಾತ್ರೆಯ ವಿಶೇಷವೆಂದರೆ ದೇವರಿಗೆ ಗೊಂಬೆಗಳನ್ನು ಅರ್ಪಿಸುವುದು ಪ್ರಮುಖ ಹರಕೆಗಳಲ್ಲಿ ಒಂದಾಗಿದೆ. ಗೊಂಬೆಗಳಲ್ಲಿಯೂ ಕೂಡಾ ಮೂರು ವಿವಿಧ ಗಾತ್ರದ ಗೊಂಬೆಗಳನ್ನು ಅರ್ಪಿಸಲಿದ್ದು, ಭಕ್ತರು ತಮ್ಮ ತಮ್ಮ ಶಕ್ತ್ಯಾನುಸಾರ ಹರಕೆಯ ಗೊಂಬೆಗಳನ್ನು ನೀಡುತ್ತಾರೆ. ಗೊಂಬೆಗಳಲ್ಲಿ ಮಹಾಸತಿ, ಜಟ್ಟಿಗರಾಯ, ಮರದ ಹುಲಿರಾಯ, ನಾಗರಕಲ್ಲು, ಹಾಯ್ ಗೂಳಿ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಸಲ್ಲಿಸಲಾಯಿತು. ಜಾತ್ರಾ ಸಮಯದಲ್ಲಿ ಪ್ರತಿ ನಿತ್ಯ ಭಕ್ತರು ಹೂವಿನ ಪೂಜೆ, ತೊಟ್ಟಿಲು ಸಮರ್ಪಣೆ, ಕಣ್ಣು, ಇತ್ಯಾದಿಗಳನ್ನು ಸಮರ್ಪಿಸಿ ತಮ್ಮ ಹರಕೆಯನ್ನು ತೀರಿಸಿದ್ದಾರೆ. ಈ ಬಾರಿ ಜಾತ್ರೆಯ ಸಂದರ್ಭದಲ್ಲಿ ಎಂಟು ದಿನಗಳ ಕಾಲ ಪ್ರಸಾದ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಮಂಗಳವಾರದಿಂದಲೇ ಪ್ರಸಾದ ಭೋಜನ ಆರಂಭಗೊಂಡು ಸಾವಿರಾರು ಭಕ್ತರ ಪ್ರಸಾದ ರೂಪದಲ್ಲಿ ಭೋಜನವನ್ನು ಮಾಡಿದರು. ದೇವಾಲಯದ ಸುತ್ತಲು ಜಾತ್ರಾ ಮಹೋತ್ಸವದ ಅಂಗಡಿ-ಮುಂಗಟ್ಟುಗಳು ಜಾತ್ರೆಯ ವೈಭವವನ್ನು ಇನ್ನಷ್ಟು ಹೆಚ್ಚಿಸಿದವು.
ಈ ಸಂದರ್ಭದಲ್ಲಿ ಕಮಿಟಿಯ ಅಧ್ಯಕ್ಷ ಭಾಸ್ಕರ ಮೊಗೇರ,ಆಡಳಿತ ಕಮಿಟಿಯ ಲಕ್ಷ್ಮೀ ನಾರಾಯಣ ನಾಯ್ಕ, ದೇವಾನಂದ ಮೊಗೇರ, ನಾಗರಾಜ ನಾಯ್ಕ, ಗೋವಿಂದ ನಾಯ್ಕ, ರಮೇಶ ದೇವಾಡಿಗ, ತಿಮ್ನಪ್ಪ ನಾಯ್ಕ, ಮಾದೇವ ನಾಯ್ಕ, ರಘು ನಾಯ್ಕ, ದಿವಾಕರ ಮೊಗೇರ ಇತರರು ಇದ್ದರು.