ಭಟ್ಕಳ: ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಬಳಸಿ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯರ ವಿರುದ್ಧ ಅವಹೇಳನಕಾರಿ ವಿಡಿಯೋ ಹಾಗೂ ಪೋಸ್ಟ್‌ಗಳನ್ನು ಹಂಚಿದ ಪ್ರಕರಣದಲ್ಲಿ, ಮುರುಡೇಶ್ವರ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಭಟ್ಕಳ ತಾಲೂಕಿನ ಬೈಲೂರು ದೊಡ್ಡಬಲಸೆಯ ಪುರಂದರ ಮಂಜುನಾಥ ನಾಯ್ಕ (37) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿಯು “ತೇಜು ನಾಯ್ಕ ಹೊನ್ನಾವರ” ಮತ್ತು “ವಂದನಾ ಪೂಜಾರಿ” ಎಂಬ ನಕಲಿ ಫೇಸ್ಬುಕ್ ಖಾತೆಗಳ ಮೂಲಕ ಈ ಪೋಸ್ಟ್‌ಗಳನ್ನು ಹಂಚುತ್ತಿದ, ಈ ಖಾತೆಗಳಿಂದ ಜೂನ್ 6, 2025 ರಂದು ಸಚಿವ ಮಂಕಾಳ್ ವೈದ್ಯರ ವಿರುದ್ಧ ಸುಮಾರು 1.29 ನಿಮಿಷಗಳ ವಿಡಿಯೋ ಹಂಚಲಾಗಿರುವುದು ಪತ್ತೆಯಾಯಿತು.
ಈ ಕುರಿತು ನಾಗಪ್ಪ ನಾಯ್ಕ ಎಂಬವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಪೊಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ ಪೊಲೀಸರು ಎರಡು ಮೊಬೈಲ್ ಫೋನ್‌ಗಳು ಸೇರಿದಂತೆ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯ ನಕಲಿ ಖಾತೆಗಳಲ್ಲಿ ಸಚಿವರ ವಿರುದ್ಧ ನಿಂದನೆ ಮಾಡಲಾಗಿದೆ.
ಮುರುಡೇಶ್ವರ ಠಾಣಾ ಪೊಲೀಸರು ಈ ಕೃತ್ಯದ ಹಿಂದೆ ಇನ್ನೂ ಯಾರಾದರೂ ಪ್ರೇರಕ ಶಕ್ತಿ ಅಥವಾ “ಕಾಣದ ಕೈ” ಇದ್ದಿರಬಹುದೇ ಎಂಬ ಅನುಮಾನದಿಂದ ತನಿಖೆಯನ್ನು ಮುಂದುವರೆಸಿದ್ದಾರೆ.
ವರದಿ:ಉಲ್ಲಾಸ್ ಶಾನಭಾಗ್
