ಭಟ್ಕಳ, ಅ.24: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಉರ್ದು ವಿಭಾಗವು ಭಟ್ಕಳದ ಅಂಜುಮನ್ ಶಿಕ್ಷಣ ಸಂಸ್ಥೆಯ ಇಬ್ಬರು ಶಿಕ್ಷಕರ ಸಂಶೋಧನಾ ಪ್ರಬಂಧಗಳಿಗೆ ಡಾಕ್ಟರೇಟ್ (ಪಿಎಚ್.ಡಿ) ಪದವಿ ಮಂಜೂರಿಸಿದೆ.
ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ಉರ್ದು ಶಿಕ್ಷಕರಾದ ಮೌಲವಿ ಅಬ್ದುಲ್ ಹಫೀಜ್ ಖಾನ್ ಅವರು
“ದಕ್ಷಿಣ ಭಾರತದ ಆಯ್ದ ಉರ್ದು ಪ್ರವಾಸ ಕಥನ ಬರಹಗಾರರು” ಎಂಬ ಶೀರ್ಷಿಕೆಯಡಿ, ಹಾಗೂ ಸಮಾಜ ವಿಜ್ಞಾನ ಶಿಕ್ಷಕ ಅಬ್ದುಲ್ ಫತಾಹ್ ಅವರು “ಹಾಫಿಜ್ ಕರ್ನಾಟಕಿ: ಝಿಕ್ರ್, ಫಿಕ್ರ್ ಔರ್ ಫನ್” ಎಂಬ ಶೀರ್ಷಿಕೆಯಡಿ ಪ್ರಬಂಧಮಂಡಿಸಿದ್ದರು.

ಇಬ್ಬರ ಸಂಶೋಧನಾ ಮಾರ್ಗದರ್ಶಕರಾಗಿದ್ದ ಡಾ. ಸನಾವುಲ್ಲಾ ಅವರು, ಇಬ್ಬರೂ ವೈವಾ ಪರೀಕ್ಷೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಸಂಶೋಧನೆ ಶೈಕ್ಷಣಿಕವಾಗಿ ಉನ್ನತ ಮಟ್ಟದ್ದಾಗಿದೆ ಎಂದು ಪ್ರಶಂಸಿಸಿದರು.
ಶಿವಮೊಗ್ಗದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪ್ರೊ. ಸಿರಾಜ್ ಅಹ್ಮದ್, ಪ್ರೊ. ನಸೀಮುದ್ದೀನ್ ಫರೀದ್, ಪ್ರೊ.
ಮೊಹಮ್ಮದ್ ನಿಸ್ಸಾರ್ ಅಹ್ಮದ್ ಹಾಗೂ ಡಾ. ಆಫಾಕ್ ಆಲಂ ಸಿದ್ದೀಕಿ ಸೇರಿದಂತೆ ಹಲವರು ಮಾತನಾಡಿ, ಹಾಫಿಜ್
ಕರ್ನಾಟಕಿ ಅವರ ಜೀವನ ಮತ್ತು ಕಾವ್ಯ ಕುರಿತು ನಡೆದ ಸಂಶೋಧನೆ ಉರ್ದು ಸಾಹಿತ್ಯ ಲೋಕಕ್ಕೆ ಹೊಸ ದಾಖಲೆ ಎಂದು ಶ್ಲಾಘಿಸಿದರು.
ಹಾಫಿಜ್ ಕರ್ನಾಟಕಿ ಅವರು ತಮ್ಮ ಕುರಿತ ಸಂಶೋಧನೆ ತಮ್ಮ ಜಿಲ್ಲೆಯಲ್ಲಿಯೇ ನಡೆದಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿ, “ಇದು ಉರ್ದು ಅಕಾಡೆಮಿಕ್ ಲೋಕದಲ್ಲಿ ಹೊಸ ಪೂರ್ವನಿದರ್ಶನ” ಎಂದರು.
ಅಬ್ದುಲ್ ಹಫೀಜ್ ಅವರ ಸಂಶೋಧನೆ ದಕ್ಷಿಣ ಭಾರತದ ಉರ್ದು ಪ್ರವಾಸ ಸಾಹಿತ್ಯ ಕ್ಷೇತ್ರದಲ್ಲಿ ಅಪರೂಪದ
ಪ್ರಯತ್ನವಾಗಿದ್ದು, ಅಬ್ದುಲ್ ಫತಾಹ್ ಅವರ ಸಂಶೋಧನೆ ಮಕ್ಕಳ ಸಾಹಿತ್ಯದ ಪೋಷಕರಾದ ಹಾಫಿಜ್ ಕರ್ನಾಟಕಿ ಅವರ ಕುರಿತಂತೆ ಮಹತ್ವದ ಗ್ರಂಥವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
