ದೇಶದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಹೋರಾಟಗಾರರು ಪ್ರಾಣತರ್ಪಣೆಗೈದಿದ್ದು ಅವರನ್ನು ನೆನಪಿಸಿಕೊಳ್ಳಬೇಕು: ತಹಶಿಲ್ದಾರ ನಾಗೇಂದ್ರ ಕೋಳಶೆಟ್ಟಿ

Share

ಭಟ್ಕಳ : ದೇಶದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಹೋರಾಟಗಾರರು ಪ್ರಾಣತರ್ಪಣೆಗೈದಿದ್ದು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಳ್ಳಬೇಕು ಎಂದು ತಹಶಿಲ್ದಾರ ನಾಗೇಂದ್ರ ಕೋಳಶೆಟ್ಟಿ ಹೇಳಿದರು.

79 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತಾಲೂಕಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ದಿನಾಚರಣೆ ಕೇವಲ ಧ್ವಜಾರೋಹಣಕ್ಕೆ ಮಾತ್ರ ಸೀಮಿತವಾಗಿರದೆ, ಲಕ್ಷಾಂತರ ಹೋರಾಟಗಾರರ ಬಲಿದಾನದಿಂದ ಸಿಕ್ಕ ಸ್ವಾತಂತ್ರ್ಯವನ್ನು ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವ ಮೂಲಕ ಉಳಿಸಿಕೊಂಡು ಮುನ್ನಡೆಯಬೇಕು ಎಂದರು.

ಸ್ವಾತಂತ್ರ್ಯದ ನಂತರದ ದಿನಗಳಿಂದ ಇಲ್ಲಿಯವರೆಗೂ ಭಾರತ ಅನೇಕ ಸಾಧನೆಯನ್ನು‌ ಮಾಡಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ವೈಜ್ಞಾನಿಕವಾಗಿ, ಗಮನಾರ್ಹ ಸಾಧನೆ ಮಾಡಿದೆ, 30 ಪ್ರತಿಶತದಷ್ಟಿದ್ದ ಸಾಕ್ಷರತೆ 70 ಪ್ರತಿಶತವನ್ನು ದಾಟಿದೆ. ಮೂರು ಪ್ರತಿಶತದಷ್ಟಿದ್ದ ಜಿ.ಡಿ.ಪಿ 6 ರಿಂದ 7 ರ ವರೆಗೂ ತಲುಪಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲಾ ಕಾಲೇಜಿನ ಸ್ಕೌಟ್ & ಗೈಡ್ಸ್ ವಿದ್ಯಾರ್ಥಿಗಳಿಂದ ನಡೆದ ಆಕರ್ಷಕ ಪಥಸಂಚಲನ ನೋಡಗರ ಗಮನ ಸೆಳೆಯಿತು. ಪಥಸಂಚಲನವನ್ನು ಶಹರಾ ಠಾಣೆಯ ಪಿ.ಎಸ್.ಐ ನವೀನ್ ನಾಯ್ಕ ಮುನ್ನಡೆಸಿದರು.

ಕಳೆದ ಸಾಲಿನಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಕೆಲಸದಲ್ಲಿ ಸಾಧನೆ ತೋರಿದ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ಸುನಿಲ್ ಎಂ, ಗ್ರಾಮೀಣ ಠಾಣೆ ಸಿ.ಪಿ.ಐ ಮಂಜುನಾಥ ಗೌಡ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಪಟ್ಟಣ ಪಂಚಾಯತ ಅಧ್ಯಕ್ಷೆ ಅಪ್ಸಾ ಖಾಜಿಯಾ, ಪುರಸಭೆ ಉಪಾಧ್ಯಕ್ಷ ಅಲ್ತಾಪ್ ಖರೂರಿ ಮತ್ತಿತರರು ಇದ್ದರು.
ಶಿಕ್ಷಕ ಹಾಗೂ ಸಾಹಿತಿ ಶ್ರೀಧರ ಶೇಟ್ ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!