ಶಿರಸಿಯಲ್ಲಿ ಡಾ.ಅಂಜಲಿ ಸುತ್ತಾಟ; ವಿವಿಧ ಕಾಂಗ್ರೆಸ್ಸಿಗರ ಮನೆಗೆ ಭೇಟಿ

Share

ಹಿರಿಯ ಸಹಕಾರಿ ಧುರೀಣ ದಿ.ಶ್ರೀಪಾದ್ ಹೆಗಡೆ ಕಡವೆ ಅವರ ಮನೆಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಭೇಟಿ ನೀಡಿ, ಕುಟುಂಬಸ್ಥರೊಂದಿಗೆ ಚಹಾಕೂಟದಲ್ಲಿ ಭಾಗಿಯಾದರು.

ದಿ.ಕಡವೆ ಅವರ ಸೊಸೆ ಪ್ರಮೋದಾ ಹೆಗಡೆ ಅವರು ಈ ವೇಳೆ ಉಡಿತುಂಬಿ ಗೌರವಿಸಿದರು. ‘ಮಾರ್ಗರೇಟ್ ಆಳ್ವಾರವರು ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಅವರಿಗೆ ಉಡಿತುಂಬಿದ್ದೆ; ಅವರು ಅಂದು ಜಯಶಾಲಿಯಾಗಿದ್ದರು. ನಿಮಗೂ ಕೂಡ ಆಶೀರ್ವದಿಸಿದ್ದೇನೆ, ನೀವೂ ಜಯಶಾಲಿಯಾಗಲಿದ್ದೀರಿ’ ಎಂದು ಪ್ರಮೋದಾ ಹೆಗಡೆ ಹಾರೈಸಿದರು. ರಾಜ್ಯ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಪಾದ ಹೆಗಡೆ ಹಾಗೂ ಅವರ ಕುಟುಂಬಸ್ಥರು ಇದ್ದರು.

ಹಿರಿಯ ಕಾಂಗ್ರೆಸ್ಸಿಗನ ಮನೆಗೆ ಭೇಟಿ: ಕಾಂಗ್ರೆಸ್ ಪಕ್ಷದ ಹಿರಿಯರಾದ ಶಿರಸಿಯ ರಾಚಪ್ಪ ಜೊಗಳೇಕರ್ ಅವರ ಮನೆಗೂ ಡಾ.ಅಂಜಲಿ ನಿಂಬಾಳ್ಕರ್ ಅವರು ಭೇಟಿ ನೀಡಿ ಅವರ ಆಶೀರ್ವಾದ ಪಡೆದು, ಚುನಾವಣೆಯ ಕುರಿತು ಚರ್ಚೆ ನಡೆಸಿದರು. ಈ ವೇಳೆ ಮನೆಯ ಮಹಿಳಾ ಸದಸ್ಯರು ಡಾ.ಅಂಜಲಿ ಅವರಿಗೆ ಉಡಿ ತುಂಬಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ್ರು, ಕೆಪಿಸಿಸಿ ಮಾಧ್ಯಮ ವಕ್ತಾರ ದೀಪಕ ದೊಡ್ಡೂರ್, ಮಹಿಳಾ ಕಾಂಗ್ರೆಸ್ ನ ಜ್ಯೋತಿ ಪಾಟೀಲ್, ರಾಚಪ್ಪ ಅವರ ಕುಟುಂಬಸ್ಥರು ಇದ್ದರು.

ಸ್ವರ್ಣವಲ್ಲಿ ಮಠದ ಅಧ್ಯಕ್ಷರ ಭೇಟಿ: ಡಾ.ಅಂಜಲಿ ಅವರು ಖಾನಾಪುರಕ್ಕೆ ತೆರಳುವ ಮಾರ್ಗಮಧ್ಯೆ ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಅಧ್ಯಕ್ಷರಾದ ವಿ.ಎನ್.ಹೆಗಡೆ ಬೊಮ್ಮನಳ್ಳಿ ಅವರನ್ನ ಭೇಟಿಯಾದರು. ಸ್ವರ್ಣವಲ್ಲಿ ಮಠಾಧೀಶರ ಭೇಟಿಯ ಕುರಿತು ಇದೇವೇಳೆ ಚರ್ಚೆ ನಡೆಸಿದರು.

ಪ್ರದೀಪ್ ಶೆಟ್ಟಿ ಮನೆಯಲ್ಲಿ ಭೋಜನ: ಇಲ್ಲಿನ ನಗರಸಭೆಯ ಮಾಜಿ ಅಧ್ಯಕ್ಷ ಪ್ರದೀಪ್ ಶೆಟ್ಟಿ ಅವರ ಮನೆಗೆ ಮಧ್ಯಾಹ್ನ ಭೇಟಿ ನೀಡಿದ ಡಾ.ಅಂಜಲಿ, ಕುಟುಂಬದ ಸದಸ್ಯರ ಯೋಗಕ್ಷೇಮ ವಿಚಾರಿಸಿದರು. ಕುಟುಂಬಸ್ಥರೊಂದಿಗೆ ಭೋಜನ ಸವಿದರು.

Leave a Reply

Your email address will not be published. Required fields are marked *

error: Content is protected !!